ಪಾರಿಜಾತ ಪರಿಣಯ
ಪಾರಿಜಾತ ಪರಿಣಯ
ದಿನಾ ಮುಂಜಾನೆ ವಾಕಿಂಗ್ ಗೆ ಎಂದು ಹೊರಟಾಗ, ಮುಂಜಾನೆಯ ಆ ಉಲ್ಲಾಸ, ಉತ್ಸಾಹವನ್ನು ಬದಿಗೊತ್ತಿ, ಸ್ವಲ್ಪ ದುಃಖವಾಗುವುದು, ಕರಿಯ ಡಾಂಬರು ರಸ್ತೆಯ ಮೇಲೆ ನಕ್ಷತ್ರ ಗಳಂತೆ ಸುಂದರವಾಗಿ ಹರಡಿರುವ ಆ ಸುಂದರ ಪುಟ್ಟ,ಪುಟ್ಟ ಮುದ್ದಾದ ಕೇಸರಿ ತೊಟ್ಟಿನ ಬಿಳಿ ಹೂಗಳನ್ನುಕಂಡು. ಒಂದು ಕ್ಷಣ ಖುಷಿಯಾದರೂ, ಇವುಗಳ ಆಯಸ್ಸು ಇನ್ನು ಕೇವಲ ಕೆಲವೇ ಗಂಟೆ ಗಳು ಎಂದು ನೆನೆದಾಗ ಮನಸ್ಸು ಮುದುಡುತ್ತದೆ. ಇಂದ್ರಾಣಿಯ ಸ್ಚರ್ಗದ ಈ ಮುದ್ದು ಪುಷ್ಪಗೆ ಶ್ರಿ ಕ್ರಿಷ್ಣ ಪರಮಾತ್ಮನೂ ಮನಸೋತಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಮುಂಜಾನೆಯ ಇಬ್ಬನಿ ಅಥವಾ ಆಷಾಡದ ತುಂತುರು ಹಸುಗೂಸಿನ ಕೆನ್ನೆಯ ಮೇಲೆ ಕೂತಂತೆ ಬಿಳಿಯ ಪಕಳೆಗಳ ಚುಂಬಿಸಿ ಕೂತಿರೆ, ಸುಮಧುರ ಸುವಾಸನೆ ತೇಲಿ ಬರುತಿರೆ ಅದೊಂತರ ದೈವಿಕ ಭಾವದ್ರಶ್ಯ ಉದ್ಭವಿಸುತ್ತದೆ. ಅದರ ಅಂದಕ್ಕೆ ಮನಸೋತು ಒಮ್ಮೊಮ್ಮೆ ಬಗ್ಗಿ ಆಯಲು ಶುರುಮಾಡುತ್ತೇನೆ. ಆಗ ನೋಡಿಪ್ಪ ಎಲ್ಲಾವೂ ನನ್ನನ್ನು, ನನ್ನನ್ನು ಎಂದು ಕೈಚಾಚಿ ಎತ್ತಿಕೊ, ಎತ್ತಿಕೋ ಎಂದು ಕೇಳುವಂತೆ ತೋರುತ್ತದೆ. ಆಯ್ದುಕೊಂಡ ವು ನಕ್ಕರೆ, ಉಳಿದ ಕೆಲವು ಅಳುಮುಖ ಮಾಡಿದಂತೆ, ಕೆಲವು ಕೋಪಿಸಿಕೊಂಡಂತೆ ಕಾಣುತ್ತವೆ. ಕೆಲವಂತು ಹುಸಿಮುನಿಸು ತೋರಿ, ಮುಖ ಆಕಡೆ ತಿರುಗಿಕೊಳ್ಳುತ್ತವೆ, ಪ್ರೇಯಸಿಯಂತೆ. ಬೇಡವೆಂದರೂ ಮುಂದಿನ ಆಯ್ಕೆ ಆ ಮುನಿಸಿಕೊಂಡ ಹೂ ಗಳೇ.
ಹೂ ಆಯುವ ಕಾರ್ಯ ಮುಂದುವರೆದಂತೆ ಮನಸ್ಸು ಅವುಗಳ ಮನ ಅರಿಯಲು ತೊಡಗುತ್ತದೆ. ಆಗಲೇ ಮುದುಡಿದ, ಬಾಡಿದ, ಒದ್ದೆಯಾದ ಹೂಗಳು ವಿಷಾದ ಭಾವಭರಿತವಾಗಿ, ಇಷ್ಟೇ ಜೀವನ ಎಂದು ನಿರಾಶಭಾವಭರಿತವಾಗಿದ್ದರೆ, ಮಧ್ಯ ವಯಸ್ಕ ಪುಷ್ಪ ಗಳು, ಸಮಯವಾಗುತ್ತಿದೆ ಪ್ಲೀಸ್ ರಸ್ತೆಯಲ್ಲಿ ಬಿಡ ಬೇಡ ಎತ್ತಿಕೊ ಎನ್ನುವ ಭಾವನೆ. ಆದರೆ ಗಿಡದಿಂದ ಆಗ ತಾನೇ ಉದುರಿದ ವಯ್ಯಾರಿಗಳು ಮಾತ್ರ ಬಿಂಕದ ಮುಖ ಹೊತ್ತು ಆಕಾಶದತ್ತ ಮುಖಮಾಡಿ ತಮ್ಮ ಕನಸಿನಲೋಕದಲ್ಲಿ ವಿಹರಿಸುತ್ತಿರುತ್ತವೆ.
ಎದ್ದು ಒಮ್ಮೆ ರಸ್ತೆ ತುಂಬಾ ಹರಡಿರುವ ಅವುಗಳ ಚೆಲುವನ್ನು ಕಣ್ತುಂಬಿಕೊಂಡಂತೆ, ಅಯ್ಯೋ, ದೇವರೆ ಇಷ್ಟು ಸೊಗಸಾದ ಹೂಗಳ ಆಯಸ್ಸು ಇನ್ನು ಕೇವಲ ಕೆಲವೇ ಗಂಟೆ ಗಳೆ ಎನಿಸಿ ಖೇದವಾಗುತ್ತದೆ. ಹಾಲಿನವರ, ಪೇಪರ್ ನವರ, ಸೊಪ್ಪು, ತರಕಾರಿ ಗಾಡಿಗಳ ಚಕ್ರಗಳ ಅಡಿಯಲ್ಲಿ ಸಿಲುಕಿ ನಶಿಸಿಹೋಗುತ್ತವೆಯಲ್ಲಾ ಎನಿಸಿ ಖೇದವಾಗುತ್ತದೆ.
ಎಷ್ಟೋ ಸಲ ಮನಸ್ಸಿಗೆ ತೋಚಿದೆ, ಮರದ ರೆಂಬೆಗಳ ಕೆಳಗೆ ಒಂದು ಪ್ಲಾಸ್ಟಿಕ್ ಷೀಟ್ ಕಟ್ಟಿಬಿಟ್ಟರೆ, ಹೂಗಳೆಲ್ಲಾ ಅದರಲ್ಲೇ ಬೀಳುತ್ತವೆ, ಆಮೇಲೆ ಬೇಕಾದರೆ ಅದನ್ನು ನೋವಾಗದ ಹಾಗೆ ಮರದ ಬುಡಕ್ಕೆ ಹಾಕಬಹುದು ಎಂದು. ಆದರೆ ಮರ ಇರುವುದೇ ಆರು ಅಡಿ ಅಥವಾ ಏಳು ಅಡಿ ಎತ್ತರ, ಇನ್ನು ಅದರ ಕೆಳಗೆ ಪ್ಲಾಸ್ಟಿಕ್ ಕಟ್ಟಿದ್ದರೆ ರೋಡಿನಲ್ಲಿ ಯಾವ ವಾಹನವೂ ಚಲಿಸುವಂತೆಯೇ ಇಲ್ಲ. ಒಮ್ಮೆ ಎದುರು ಮನೆಯಾತನ ಬಳಿ ಇದರ ಬಗ್ಗೆ ಚರ್ಚಿಸಿದ್ದೆ ಕೂಡ. ಆದರೆ ಯಾಕೋ ಆತ ಏನೂ ಮಾತನಾಡದೆ ನನ್ನ ಮುಖವನ್ನೇ ಧೀರ್ಘ ವಾಗಿ ನೋಡಿ ಹೋಗಿಬಿಟ್ಟವನು, ಈ ನಡುವೆ ನನ್ನ ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ.
ಈ ಎಲ್ಲಾ ಭಾವನೆಗಳ ಭಾರ ಹೊತ್ತು, ವಾಕಿಂಗ್ ಮುಗಿಸಿ ಬರುವ ಹೊತ್ತಿಗಾಗಲೇ ನೂರಾರು ಮುದ್ದುಗಳು ಆತ್ಮಾಹುತಿ ಮಾಡಿಕೊಂಡು ಬಿದ್ದಿರುತ್ತವೆ, ಕೆಲವು ಕೈಕಾಲು ಊನ ಮಾಡಿಕೊಂಡು ನರಳುತ್ತಿರುತ್ತವೆ. ಮನಸ್ಸು ಅವುಗಳಿಗೆ ಈ ಗತಿ ತಂದವರನ್ನು ನೆನೆದು ವ್ಯಘ್ರವಾಗಿ, ಸ್ವಲ್ಪ ನೋಡಿಕೊಂಡು ಪಕ್ಕದಲ್ಲಿ ಹೋಗಬಾರದೇ ಎಂದು ಚೀರಿಡುತ್ತೆ.
ಮನೆ ತಲುಪಿದೊಡೆ, -----ಮತ್ತದೇ ದಿನ, ಅದೇ ಚಿಂತೆ, ಅದೇಬಾಳು , ಅದೇ ಗೋಳು.
ಮತ್ತೆ, ಮುಂಜಾನೆ, ಸುಂದರ ಪುಷ್ಪ ಗಳು ರಸ್ತೆ ತುಂಬಾ::::::::.
ನೆಲಮನೆ ಶ್ರೀನಿವಾಸನ್
FB 7/7/2020.

Comments