ಬೇಲದ - ಬಾಲ್ಯದ- ಭಾಂದವ್ಯ
ಬೇಲದ - ಬಾಲ್ಯದ- ಭಾಂದವ್ಯ
ಇಂದಿನ ತಲೆ ಮಾರಿನ ಎಷ್ಟೋ ಜನರಿಗೆ ಹೀಗೊಂದು ಹಣ್ಣು ಇದೆ, ಅದರ ಅದ್ವಿತೀಯ ಔಷದಿ ಗುಣಗಳು, ಅದರಿಂದ ಮಾಡಬಹುದಾದ ವಿವಿಧ ರುಚಿಯ ಪದಾರ್ಥಗಳು, ಪಾನೀಯಗಳ ಕಲ್ಪನೆಯು ಇಲ್ಲ. ನಾನು ಹೇಳುತ್ತಿರುವುದು ಮೆಟ್ರೊ ನಗರದಲ್ಲಿ ಹುಟ್ಟಿ, ಬೆಳೆದು ಬದುಕುತ್ತಿರುವ ನಮ್ಮವೇ ಕುಡಿಗಳ ಬಗ್ಗೆ.
ಬೇಲದ ಹಣ್ಣನ್ನು ನೋಡುತ್ತಿದ್ದಾಗ, ಬಾಯಿ ನೀರು ಸ್ರವಿಸುತ್ತಿದ್ದರೆ, ಕಣ್ಣುಗಳು ಸಂತೋಷ ಅನುಭವಿಸುವಾಗ ಮನಸ್ಸು ಬಾಲ್ಯದ ಕಡೆಗೆ ಓಡುತ್ತಿತ್ತು. ಅಣ್ಣ ( ಅಪ್ಪನನ್ನು ನಾವು ಹಾಗೆ ಕರೆಯುತ್ತಿದ್ದದ್ದು) ಮಾನಂದವಾಡಿ, ಎಚ್.ಡಿ. ಕೋಟೆ, ಸರಗೂರು ಕಡೆ ಕೆಲಸದ ಮೇಲೆ ಹೋಗಿ ವಾಪಸ್ದು ಬರುವಾಗ ಒಂದು ದೊಡ್ಡ ಬ್ಯಾಗಿನ ತುಂಬ ಸುಮಾರು 50-60 ಚೆನ್ನಾಗಿ ಮಾಗಿದ, ಕಂದು ಬಣ್ಣಕ್ಕೆ ತಿರುಗಿದ ವಾಸನೆಯುಕ್ತ ಬೇಲದ ಹಣ್ಣು ತರುತ್ತಿದ್ದರು. ನಾವು ನಾಲ್ವರು ಅಣ್ಣ, ತಮ್ಮಂದಿರು , ಅಕ್ಕ ಪೈಪೋಟಿ ಮೇಲೆ ಮೊದಲು ಒಂದೊಂದು ಹಣ್ಣು ಆರಿಸಿಕೊಂಡು ಅಡಿಗೆ ಮನೆಗೆ ಓಡುತ್ತಿದ್ದೆವು. ಕೈ, ಕಾಲು ತೊಳೆಯದೆ ಅಡಿಗೆ ಮನೆಗೆ ಬರುತ್ತೀರ ಎಂಬ ಅಮ್ಮನ ಬೈಗುಳಗಳಿಗೆ ಜಾಸ್ತಿ ಗಮನ ಕೊಡದೆ ನಮಗೆ, ನಮ್ಮ ಜಿಹ್ವಾಚಾಪಲ್ಯಕ್ಕೆ ತಕ್ಕಂತೆ ಬೇಕಾದ ಸಾಮಾನು ತೆಗೆಯುವುದರಲ್ಲಿ ಮಗ್ನರಾಗುತ್ತಿದ್ದೆವು. ನಮಗೆ ಗೊತ್ತು, ಅಮ್ಮನೂ ಬೇಲದ ಹಣ್ಣುಕಂಡು ಖುಷಿಯಾಗಿ , ಅವಳ ಲೆಕ್ಕಾಚಾರ ದಲ್ಲಿ ಮುಳುಗಿರುತ್ತಾಳೆ ಎಂದು. ಪಾಪ ಅವಳ ಲೆಕ್ಕಾಚಾರವಾದರೂ ಏನು? ಈ ಕೋತಿಗಳ ಹಿಂಡಿನಿಂದ ಆದಷ್ಟು ಹಣ್ಣುಗಳನ್ನು ಕಾಪಾಡಿ , ಈ ಸಲ ಏನೇನು ಮಾಡಬಹುದು ಎಂದು. ಆ ಕಡೆ ಅವಳು ಹಣ್ಣುಗಳ ಅವುಗಳ ಬಣ್ಣ, ಗಾತ್ರ, ವಾಸನೆಗೆ ತಕ್ಕಂತೆ ವಿಂಗಡಿಸಿ ಪಾನಕಕ್ಕೆ ಎಷ್ಟು, ಗೊಜ್ಜಿಗೆ ಎಷ್ಟು, ಚಟ್ನಿಗೆ ಎಷ್ಟು, ಬೆಲ್ಲ, ಒಣಶು೦ಟಿ,ಮೆಣಸಿನಪುಡಿ ಹಾಕಿ ಚೆನ್ನಾಗಿ ಒರಳುಕಲ್ಲಿನಲ್ಲಿ ಕುಟ್ಟಿ ಉಂಡೆ ಮಾಡಲಿಕ್ಕೆ ( ಅದು ಅಪ್ಪನ ಫ಼ೇವರೇಟ್ ಸಂಜೆ ಖಾದ್ಯ) ಎಷ್ಟು ಎಂದು ಎತ್ತಿ ಇಟ್ಟುಕೋಳ್ಳುತ್ತಿದ್ದಳು.
ಈ ಕಡೆ ನಮ್ಮ ವಾನರ ಸೈನ್ಯ ಡಬ್ಬಗಳನ್ನು ಎಳೆದಾಡಿ ನಮಗೆ ಬೇಕಾದ ಪದಾರ್ಥಗಳಿಗೆ ಜಗಳ ಮಾಡುತ್ತಿದ್ದೆವು.
ಅಕ್ಕ ಬಹಳ ಸಂಯಮದಿಂದ ತಿರಿಳನ್ನು ಬೀಜದಿಂದ ಬೇರ್ಪಡಿಸಿ ಅದಕ್ಕೆ ಹದವಾಗಿ ಕಾಯಿ, ಬೆಲ್ಲ ಬೆರೆಸಿ ಅದರ ಮೇಲೆ ವಾಸನೆಗೆ ಏಲಕ್ಕಿ ಕುಟ್ಟಿ ಪುಡಿಮಾಡಿ ಬೆರೆಸಿ ಇಡೀ ಹಣ್ಣನ್ನು ಮತ್ತೆ ಕಾಲಿ ಮಾಡಿದ ಹಣ್ಣಿನ ಕರಟಕ್ಕೆ ತುಂಬಿಸಿ , ಅವಳ ಗೆಳತಿ ಗೀತಾಳನ್ನು ಕರೆದು ಮನೆ ಮುಂದಿನ ತೋಟದಲ್ಲಿ ಕುಳಿತುಕೊಳ್ಳಲು ಓಡುತ್ತಿದ್ದಳು. ಎರಡನೇ ಅಣ್ಣ ನಟರಾಜ, ತಾಳ್ಮೆಯ ಶಬ್ದಕ್ಕೆ ಅಪವಾದ. ಹಣ್ಣು ಒಡೆದು, ಕರಟ ಸಮೇತ ಹಲ್ಲಿನಲ್ಲಿ ಕೆರೆದು, ಕೆರೆದು ತಿನ್ನುತಿದ್ದ, ಮಧ್ಯೇ, ಮಧ್ಯೇ, ಎಡದ ಕೈಯಲ್ಲಿ ಹಿಡಿದ ಬೆಲ್ಲ ಕಡೆಯುತ್ತಿದ್ದ.
ಮೂರನೆಯ ಅಣ್ಣ ಶಿಸ್ತಿನ ಪ್ರತಿರೂಪ. ಹಣ್ಣು ಒಡೆದು , ಒಂದು ಚಮಾಚದಿಂದ ತಿರುಳನ್ನು ಬೇರ್ಪಡಿಸಿ ಅದನ್ನು ಒಂದು ತಟ್ಟೆಗೆ ವರ್ಗಾಯಿಸಿ, ಹೊಸ ಕಾಯಿ ಒಡೆದು, ಹದವಾಗಿ ಇಳಿಗೆಮಣೆಯಿಂದ ತುರಿದು, ಅದಕ್ಕೆ ಬೆಲ್ಲ, ಮೆಣಸಿನ ಪುಡಿ, ಚೂರು ಜೀರಿಗೆ ಪುಡಿ, ಚೂರು ಕಾಳು ಮೆಣಸಿನ ಪುಡಿ, ಅದಕ್ಕೆ ನೆನೆಸಿದ ಅವಲಕ್ಕಿ ಸೇರಿಸಿ, ಹದವಾಗಿ ಕಲೆಸಿ, ಒಂದು ದೊಡ್ಡದಾದ ಬಟ್ಟಲಿಗೆ ವರ್ಗಾಯಿಸಿ, ಹೋಗಿ ಸೀಬೆ ಮರದ ಎತ್ತರದ ಕೊಂಬೆಯನ್ನು ಆಶ್ರಯಿಸಿ ಸಿನಿಮಾ ಹಾಡು ಹಾಡುತ್ತ , ಆನಂದಭರಿತನಾಗಿ ತನ್ನ ಕೈರುಚಿ ಸವಿಯುತ್ತಾ ಅವನ ಕಲ್ಪನಲೋಕ ಸೇರುತ್ತಿದ್ದ.
ಇನ್ನು ಅತ್ಯಂತ ಹಿರಿಯ ಅಣ್ಣ, ಜವಾಬ್ದಾರಿ ಯುತ ವ್ಯಕ್ತಿ, ಯಾವತ್ತು ನಾಳೆಯ ಬಗ್ಗೆ ಚಿಂತಿಸುವವ, ಹತ್ತು ನಿಮಿಷ ಹಣ್ಣನ್ನು ಕೈಯಲ್ಲೇ ಹಿಡಿದು ತಿನ್ನುವುದೊ, ಬೇಡವೊ ಎಂಬ ಜಿಜ್ಞಾಸೆ ಪರಿಹರಿಸಲಾರದೆ, ಕಡೆಗೆ ಭವಿಷ್ಯ ದ ಭಯವೇ ಅಧಿಕ ವಾಗಿ, ಅವನಿಗಾಗಿ ಕಾಯ್ದಿರಿಸಿಲಾದ ಕಪಾಟಿನ ಭಾಗದಲ್ಲಿ , ಬಟ್ಟೆಗಳ ನಡುವೆ ಮುಚ್ಚಿಡುತ್ತಿದ್ದ. ಮುಂದೆ ಎರಡು ದಿನ ಅದನ್ನು ಬೇರೆ ಸಹೋದರ ವಾನರುಗಳಿಂದ ಕಾಯುವುದೇ ಅವನ ಕಾಯಕವಾಗುತ್ತಿತ್ತು. ನಮಗೆ , ಅವನಿಗೆ ತಿಳಿಯದೆ ಅದನ್ನು ಎಗರಿಸುವುದು, ಜೀವನದ ಮಹತ್ಕಾಂಷೇ ಆಗಿರುತ್ತಿತ್ತು.
ಇನ್ನು ನಾನೆ ಕಿರಿಯ, ಯಾವ ಸಾಮಾನು, ಎಷ್ಟು ಹಾಕಬೇಕು ಅಷ್ಟು ತಿಳುವಳಿಕೆಯಿಲ್ಲ, ಆದರೆ ಅದನ್ನು ನಂಬಲು ಸಿದ್ದನಿಲ್ಲ. ಪ್ರತಿಸಲ ಬೆಟ್ಟು ಕೊಯ್ದು ಕೊಂಡೊ, ಇಲ್ಲ ಕಲ್ಲಿನ್ನಿಂದ ಜಜ್ಜಿಕೊಂಡೊ ಏನಾರ ಮಾಡಿಕೊಂಡು ಅಳಲು ಶುರು. ಅಮ್ಮನೋ, ಅಣ್ಣನ ಓಡಿ ಬಂದು ಉಪಚಾರ ಮಾಡಿ, ಬೇರೆಯವರಿಗೆಲ್ಲ ಬೈದು , ಎಲ್ಲರ ಹತ್ತಿರವೂ ನನಗಾಗಿ ಚೂರು, ಚೂರು ತೆಗೆಸಿ ಕೊಡುತ್ತಿದ್ದರು. ಪ್ರತಿ ಸಲ ನಾನು ಬೇಕೆಂದೆ ಏನಾರ ಮಾಡಿ ಕೊಳ್ಳುತ್ತೀನಿ ಎಂದು ಅವರ ವಾದ.
ಮುಂದೆ ನಾಲ್ಕು, ಐದು ದಿನ ಬೇಲದ ಹಣ್ಣಿನ ಸವಿರುಚಿಯೇ ಮನೆ ತುಂಬ. ಅಮ್ಮ ಏನಿಲ್ಲವೆಂದರೂ ಕನಿಷ್ಟ ಎ೦ಟು, ಹತ್ತು ವಿವಿಧ ಪದಾರ್ಥಗಳನ್ನು ಮಾಡುತ್ತಿದ್ದಳು.
ಮನೆಯಲ್ಲಿ ಬೇಲದ ಹಣ್ಣು ಇರುವಾಗ , ಆನೆ ಬಂದರೆ ಅಷ್ಟೇ, ಅವತ್ತೆಲ್ಲಾ ಅದರ ಹಿಂದೆಯೇ ತಿರುಗುವುದು.ನಾವು ಇದ್ದದ್ದು ಮೈಸೂರಿನಲ್ಲಿ . ಆಗ ಮಹಾರಾಜರು ಇನ್ನು ದಸರಾದರ್ಭಾರ್ ನಡೆಸುತ್ತಿದ್ದರು. ಅರಮನೆಯ ಆನೆಗಳನ್ನು ವ್ಯಾಯಾಮಕ್ಕಾಗಿ ನಗರದಲ್ಲಿ ತಿರುಗಾಡಿಸುತ್ತಿದ್ದರು. ಅಂಗಡಿ,ಹೋಟೆಲ್ ನವರು ಅದಕ್ಕೆ ಕಾಯಿ, ಬೆಲ್ಲ, ಬಾಳೆ ಹಣ್ಣು ಮುಂತಾದವು ಗಳನ್ನು ತಿನ್ನಿಸುತ್ತಿದ್ದರು. ನಾವುಗಳು ಆ ಆನೆಗಳಿಗೆ ಬೇಲದ ಹಣ್ಣು ತಿನ್ನಿಸುತ್ತಿದ್ದೆವು. ಏಕೆಂದರೆ ಆನೆ ಬೇಲದ ಹಣ್ಣು ಜಗಿಯದೆ ಹಾಗೇ ನುಂಗುತ್ತಿತ್ತು. ಅದು ಲದ್ದಿ ಹಾಕಿದಾಗ ಹಣ್ಣು ಒಡೆಯದೆ ಹಾಗೆ ಬರುತ್ತಿತ್ತು, ಆದರೆ ಅದನ್ನು ಒಡೆದರೆ ಒಳಗೆ ಎನೂ ಇರುತ್ತಿರಲಿಲ್ಲ. ಇದು ನಮಗೆ ಅತ್ಯಂತ ಸೋಜಿಗದ ಸಂಗತಿ. ಅದನ್ನು ಪರೀಕ್ಶಿಸಲು ಆನೆಗೆ ಬೇಲದ ಹಣ್ಣು ತಿನ್ನಿಸಿ ಅದರ ಹಿಂದೆ ದಿನವೆಲ್ಲಾ ಸುತ್ತಿದ್ದಿದೆ.ಒಮ್ಮೆ ಮಾತ್ರ ನಮ್ಮ ಅಣ್ಣನ ಕಣ್ಣಿಗೆ ಈ ಸೋಜಿಗ ಕಂಡಿತ್ತು.
ಬೇಲದ ಹಣ್ಣನ್ನು ಅತಿಯಾಗಿ ತಿಂದು ಕೆಮ್ಮು,ಜ್ವರ ಬೇಧಿ, ಅನುಭವಿಸಿಯೂ ಆಗಿದೆ. ಆದರೆ ಅದರ ಗಮ್ಮತ್ತು, ಚಪಲ ಇಂದಿಗೂ ಕಮ್ಮಿಯಾಗಿಲ್ಲ. ಇಂದು ವಾಕಿಂಗ್ ಹೋದಾಗ ಮಾರುತ್ತಿದ್ದ ಹಣ್ಣು ಕಂಡು, ತಂದು ಗೊಜ್ಜು ಮಾಡಿದಾಗ , ಹಳೆಯದೆಲ್ಲಾ ನೆನಪಾಗಿ, ಈ ಬೇಲದ ಪುರಾಣ.
ನೆಲಮನೆ ಶ್ರೀನಿವಾಸನ್

Comments