ಉಪ್ಪಿಟ್ಟಿನ ಪ್ರಹಸನ
ಉಪ್ಪಿಟ್ಟಿನ ಪ್ರಹಸನ
ಬಿಸಿ ಬಿಸಿ ಅಕ್ಕಿ ತರಿ, ಸಬ್ಬಸಿಗೆ
ಸೊಪ್ಪಿನ
ಉಪ್ಪಿಟ್ಟು, ಹಿಂದಿನ ದಿನವಷ್ಟೇ ಉಡುಪಿಯಿಂದ ಬಂದಿದ್ದ ಕೆಂಪು ಅಪ್ಪೆಮಿಡಿ ಉಪ್ಪಿನಕಾಯಿ, ಕರಿಬೇವಿನ ಚಟ್ನಿಪುಡಿ, ಘಮ್ಮೆಯೆನಿಸುತ್ತಿದ್ದ ಹಸುವಿನ ತುಪ್ಪ, ಹೊರಗಡೆ ಚಿಟಿ, ಚಿಟಿ ಮಳೆ, ಸ್ವರ್ಗಕ್ಕೇ ಕಿಚ್ಚು ಹಚ್ಚಲು ಬೇರೆನು ಬೇಕು.? ಅದೇನೋ ಗೊತ್ತಿಲ್ಲ, ಈ ಉಪ್ಪಿಟ್ಟು ಅನ್ನೋದು ಒಂದೊಂದು
ವಯಸ್ಸಿಗೆ ಒಂದೊಂದು ತರ ತೋರುತ್ತೆ.
ಈಗ
ಒಂದು ಹದಿನೈದು - ಇಪ್ಪತ್ತು ವರ್ಷದಿಂದೀಚೆಗೆ ಬಹಳೇ ಇಷ್ಟವಾಗುತ್ತಿದೆ.
ಬಾಲ್ಯದಲ್ಲಿ ಅದು ನನ್ನ ಪಾಲಿನ ಶತ್ರು. ನನ್ನ ತಪ್ಪಾದರೂ ಏನು? ವಾರದಲ್ಲಿ ಮೂರು ದಿನ ಬೆಳಗ್ಗೆ ಅದೇ ತಿಂಡಿ. ಈಗ ಅನಿಸುತ್ತಿದೆ, ಅವರಾದರೂ ಇನ್ನು ಮಾಡಬೇಕು? ಮನೆಯಲ್ಲಿ ಆರುಜನ, ಎಲ್ಲರು ಬೇಗ ಹೊರಡಬೇಕು,ಸೌದೆ ಓಲೆ, - ಗ್ಯಾಸ್ ಬಿಡಿ, ಸೀಮೇಎಣ್ಣೆ ಸ್ಟವ್ ಕೂಡ ಇರಲಿಲ್ಲ.ಇನ್ನು ಸೌದೆ ಹಸಿಯಾಗಿದ್ದಾರೆ ದೇವರೆಗತಿ . ಹೀಗಾಗಿ ಸುಲಭದ ತಿಂಡಿ ಎಂದರೇ ಅವಲಕ್ಕಿ, ಪೊಂಗಲ್, ಉಪ್ಪಿಟ್ಟಿ ಮತ್ತೆ ಅದೇ ಕ್ರಮದಲ್ಲಿ ಮುಂದುವರಿಕೆ. ದೋಸೆ, ಪೂರಿ, ಚಪಾತಿ ಎಲ್ಲ ಬೇಸಿಗೆ, ದಸರಾ ರಜೆ ಇದ್ದಾಗ. ಹೀಗಾಗಿ ಉಪ್ಪಿಟ್ಟು ಅಂದರೆ ಅಲರ್ಜಿಯಾಗಿಬಿಟ್ಟಿತ್ತು. ಇದು ಯಾವ ಅತಿರೇಕಕ್ಕೆ ಹೋಯಿತು ಅಂದರೆ, ಬಹುಶ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಉಪ್ಪಿಟ್ಟಿನ
ಹೆಸರೆತ್ತಿದರೆ ಟಾಯ್ಲೆಟ್ಗೆ
ಹೋಗುವ ಹಾಗೆ ಒತ್ತಡ ಬರಲು ಶುರುವಾಗಿ ಉಪ್ಪಿಟ್ಟು ತಿನ್ನುವುದನ್ನೇ ಬಿಟ್ಟು ಬಿಟ್ಟೆ. ಅದೊಂದು ತರ ಸೈಕೊಲಾಜಿ ನನ್ನನ್ನು
ಅವರಿಸಿಕೊಂಡುಬಿಟ್ಟಿತ್ತು. ಇದು ನಮ್ಮ ಬಂದು ಬಳಗ ಎಲ್ಲರಿಗು ಗೊತ್ತಾಗಿ ಅಕಸ್ಮಾತ್ ಅವರ ಮನೆಗಳಿಗೇನಾದರೂ ಹೋದರೆ ನಂಗೆ ಬೇರೆ ತಿಂಡಿ ಮಾಡಿಕೊಡುತ್ತಿದ್ದರು. ಫಾರ್ಮಸಿ ಸ್ನಾತಕೋತ್ತರ
ಪದವಿ ಓದುತ್ತಿದ್ದ ನನ್ನ ಅಣ್ಣ ಅವನ ಕಾಲೇಜಿನ ಮ್ಯಾಗಜಿನ್ಗೆ ಸೈಕೊಲಾಜಿಕಲ್ ಇಂಪ್ಯಾಕ್ಟ್ ಎಂದು ನನ್ನ ಉಪಿಟ್ಟಿನ ಭಯದ ಬಗ್ಗೆ ಒಂದು ಲೇಖನ ಕೂಡ ಬರೆದು ಪ್ರಕಟಿಸಿಬಿಟ್ಟಿದ್ದ.
ಆದರೆ ಕಾಲೇಜಿಗೆ ಬರುವಷ್ಟರಲ್ಲಿ ಆ ಭಯದಿಂದ ಈಚೆ ಬಂದು ಮತ್ತೆ ಗಾಢವಾಗಿ ಅಲ್ಲದಿದ್ದರೂ ಸೌಮ್ಯವಾಗಿ ಉಪ್ಪಿಟ್ಟಿನ ನೆಂಟಸ್ಥಿಕೆ ಬೆಳಸಿದ್ದೆ.
ಆದರೂ ಅದು ಇಷ್ಟಪಟ್ಟು ತಿನ್ನುವ ತಿನಿಸಾಗಿರಲಿಲ್ಲ. ಎಂಜಿನೀರಿಂಗ್ ಓದುವಾಗ ಅಕ್ಕನ ಮನೆಯಲ್ಲಿ ಠಿಕಾಣಿ. ಮತ್ತೆ ಅದೇ ಸಮಸ್ಯೆ. ಇಬ್ಬರು ಸ್ಕೂಲಿಗೆ ಹೋಗುವ ಮಕ್ಕಳು, ಗಂಡನಿಗೆ ತಿಂಡಿ, ಊಟ ಒಟ್ಟಿಗೆ ತಯಾರಾಗಬೇಕು, ಗೊತ್ತಲ್ಲ ಮತ್ತೆ ಎಲ್ಲ ಅಕ್ಕಂದಿರ,ಅಮ್ಮಂದಿರ ಪತ್ನಿಯರ
ಆಪತ್ಬಾಂದವ ಉಪ್ಪಿಟ್ಟೇ ಗತಿ. ಎಷ್ಟೋ ಸಲ ಬೆಳಗ್ಗೆ ೭ಕ್ಕೆ ಹೊರಡಬೇಕು, ಲೇಟ್ ಆಯಿತು ಎಂದು ಉಪ್ಪಿಟ್ಟು ತಪ್ಪಿಸಿಕೊಂಡು ಕ್ಯಾಂಟೀನ್ ನಲ್ಲಿ ದೋಸೆನೋ, ಇಡ್ಲಿ ವಡೆ ನೋ
ತಿನ್ನೋಣ ಎಂದು ಪ್ಲಾನ್ ಮಾಡಿದರೆ, ಅಕ್ಕನ ಅಂತಃಕರಣ ಕೇಳುತ್ತಿರಲಿಲ್ಲ, ಒಂದು ನಿಮಿಷ ಇರೋ, ಒಂಚೂರು ಉಪ್ಪಿಟ್ಟು ಕೆದಕಿ ಕೊಡ್ತೀನಿ ಅನ್ನುತ್ತಿದ್ದಳು. ಅವಳು ಹಾಗೆ ಹೇಳಿದರೂ ಅದು ರುಚಿಯಾಗಿರುತ್ತಿತ್ತು
ಆದರೆ ಅಂದು ಕೆದಕಿ ಕೊಡುತ್ತೀನಿ ಅನ್ನೋದರಲ್ಲೇ ಅದರ ಸ್ಥಿತಿ ತಪ್ಪಾಗಿ ಕಲ್ಪಿಸಿಕೊಂಡು,
ಬೇಡ ಲೇಟ್ ಆದರೆ ಬಯ್ಯುತ್ತಾರೆ ಎಂದು ಅವಸರವಸರವಾಗಿ ಹೊರಟುಬಿಡುತ್ತಿದ್ದೆ. ವಾಪಸ್ಸು ಬಂದಾಗಲೂ ಅವಳ ಕಕ್ಕುಲತೆ ಕಡಿಮೆಯಾಗಿರುತ್ತಿರಲಿಲ್ಲ, ಬೆಳಗ್ಗೆ ಏನೂ ತಿಂದಿರಲಿಲ್ಲ ಬೇಗ ಬಾ ಊಟಮಾಡು ಎಂದು ಉಪಚರಿಸುತ್ತಿದ್ದಳು. ಇಂದು ದಿನಾ ಉಪ್ಪಿಟ್ಟು ಮಾಡು ತಿನ್ನುತ್ತೀನಿ ಎಂದು ಹೇಳಿದರೂ, ಪ್ರೀತಿಯಿಂದ ಮಾಡಿ ಬಡಿಸಲು ಅವಳಿಲ್ಲ.
ಪದವಿ ಮುಗಿಸಿ ರಾಜಸ್ಥಾನದಲ್ಲಿ ಇಂಜಿನಿಯರ್
ಆಗಿ ಕೆಲಸಕ್ಕೆ ಸೇರಿ ಎರಡು ತಿಂಗಳಾಗಿ, ಪರೋಟ, ಬ್ರೆಡ್ ಜಾಮ್, ರೋಟಿ, ಕುಲ್ಚಾ ಎಲ್ಲಾ ಬೇಸರವಾಗಿ ಇದ್ದ ಒಂದೇ ದಕ್ಷಿಣ ಭಾರತದ ಹೋಟೆಲ್ಗೆ ಹೋಗಿ ಕೆಟ್ಟದಾದ, ಹುಳಿ ಬಂದ ದೋಸೆ, ಇಡ್ಲಿ ಬೇಸರವಾಗಿ ಉಪ್ಪಿಟ್ಟಿಗೆ ಶರಣಾದೆವು. ಏನೋ ಒಂದುತರ ಪೇಸ್ಟ್ ನಂತೆ ಉಪ್ಪು ಉಪ್ಪಾಗಿ, ಇದ್ದರೂ ಬಿಸಿಯಾಗಿದ್ದಿದ್ದರಿಂದ ಅದೇ ವಾಸಿ ಎನಿಸಿತ್ತು.
ಅಲ್ಲಿಂದ ಬೆಳಗಾವಿಗೆ ಬದಲಾದ ನಂತರ ಬೇಡವೆಂದರೂ ಉಪ್ಪಿಟ್ಟಿನ ನಂಟು ಜೋರಾಯಿತು. ಏಕೆಂದರೆ ಕ್ವಾರ್ಟರ್ಸ್ ನಲ್ಲಿದ್ದ ಮಾಸ್ಟರ್ ಚೆಫ್ ಪಾಟೀಲನಿಗೆ ತಿಂಡಿ ಎಂದರೆ ಮಾಡಲು ಬರುತ್ತಿದ್ದದು ಉಪ್ಪಿಟ್ಟೊಂದೇ. ಅದಕ್ಕೆ ಉಳ್ಳಾಗಡ್ಡಿ, ಕ್ಯಾಬೇಜ್, ಆಲೂ, ಏನಾದರೂ ಹಾಕಿಬಿಟ್ಟರೆ ಅದು ಸ್ಪೆಷಲ್ ಉಪ್ಪಿಟ್ಟು. ಅದರ ಮೇಲೆ ಸೇವ್ ಉದುರಿಸಿಕೊಟ್ಟರೆ ಅದು ಅಲ್ಟಿಮೇಟ್. ಅವನ ಬಾಷೆಯಲ್ಲಿ ಉಪ್ಪಿಟ್ಟು ಗಂಡನಾದರೆ , ಶಿರಾ ಹೆಂಡತಿ. ಒಮ್ಮೊಮ್ಮೆ ಅವನಿಗೆ ರಜ ಬೇಕಾದಾಗ "ಗಂಡ ,ಹೆಂಡತಿ" ( ಅವನೇ ರಸಿಕತನದಿಂದ ಇಟ್ಟ ಹೆಸರು, ಬೆಂಗಳೂರಿನ ನೀರಸ ಹೆಸರು, ಚೌ ಚೌ ಬಾತ್.)ಮಾಡಿ ಮಸ್ಕಾ ಹೊಡೆಯುತ್ತಿದ್ದ. ಎರಡಕ್ಕೂ ಏನೂ ಅಂತ ವ್ಯತ್ಯಾಸ ವಿರುತ್ತಿರಲಿಲ್ಲ, ಗಂಡನಿಗೆ ಉಪ್ಪು ಹಾಕಿದರೆ, ಹೆಂಡತಿಗೆ ಸಕ್ಕರೆ ಹಾಕಿ ಕೆದಕಿಟ್ಟರೆ ಮುಗಿಯಿತು. ದ್ರಾಕ್ಷಿ, ಗೋಡಂಬಿ ತುಪ್ಪ ಇವುಗಳ ಸಿಂಗಾರ ಯಾವತ್ತೂ ಅವಳಿಗೆ ಮಾಡಲಿಲ್ಲ.
ಮುಂದೆ ದೇಶ,ವಿದೇಶದ ಪ್ರವಾಸಗಳಿಂದ
ವಾಪಸ್ ಆಗುತ್ತಿದ್ದಂತೆ ಮನಸ್ಸು ಹಾತೊರೆಯುತ್ತಿದ್ದದು ತಿಳಿ ಸಾರು, ಹುಳಿ, ಉಪ್ಪಿಟ್ಟು, ದೋಸೆ ಸವಿಯಲು.
ಈ ಗಂಡಸರ
ಆಸಕ್ತಿಯೇ ಹಾಗೆ , ಬಾಲ್ಯದಲ್ಲಿ ಬೇಡವಾದದ್ದು
ಯೌವನದಲ್ಲಿ ಓ.ಕೆ., ಮದ್ಯವಯಸ್ಕನಾದಾಗ ಪ್ರೀತಿ, ಹಿರಿವಯಸ್ಸಿನಲ್ಲಿ ಅಪ್ಯಾನಮಾನವಾಗುತ್ತೆ.
ಇದೇ ಲಾಜಿಕ್ ಉಪ್ಪಿಟ್ಟಿಗೂ ಅನ್ವಯಿಸುತ್ತೆ. ಐವತ್ತು, ಐವತ್ತೈದು ಆದ ಮೇಲಂತೂ ಉಪ್ಪಿಟ್ಟಿನ ನಿಜ ಸ್ವರೂಪ, ಗುಣಗಳು ಅರಿವಾಗತೊಡಗಿದವು.
ಚಳಿ,
ಮಳೆ ಇದ್ದಾಗಲಂತೂ ಅದರ ಗಮ್ಮತ್ತೇ ಬೇರೆ. ನಿಜವಾಗಲೂ ಸ್ವಲ್ಪ ಕ್ರಿಯೇಟಿವಿಟಿ ಇದ್ದರೆ
ಎಷ್ಟು ವೆರೈಟಿ ಉಪ್ಪಿಟ್ಟು ಮಾಡಬಹುವುದು. ಅಕ್ಕಿ ತರಿ, ಮೀಡಿಯಂ ರವೆ, ಚಿರೋಟಿ ರವೆ, ಬನ್ಸಿ ರವೆ ,ಇವು ಮೂಲ ಸಾಮಗ್ರಿ ಅಂತಾದರೆ ಅದರೊಟ್ಟಿಗೆ ತೊಗರಿ ನುಚ್ಚು, ಹೆಸರೂ ಬೇಳೆ ನುಚ್ಚು ಸೇರಿಸಿ ರುಚಿ ಬೇರೆ ಮಾಡಬಹುದು. ಅದನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯೇ ಹೆಸರಿನಿಂದ ಕರೆಯುವವಾಡಿಕೆಯೂ ಇದೆ. ಅವಲಕ್ಕಿ, ಸಾಬೂದಾನ ಉಪ್ಪಿಟ್ಟುಗಳು ಕಸಿನ್ ಗಳಾದರೆ, ಸಿರಿಧಾನ್ಯ, ಓಟ್ಸ್ ಗಳ ಉಪ್ಪಿಟ್ಟು ದಾಯಾದಿಗಳು. ಇನ್ನು ತರಹೇವಾರು ತರಕಾರಿ ಹಾಕಿ, ತೆಂಗಿನತುರಿ, ಕೊತ್ತಂಬರಿ, ಉದುರಿಸಿ ನಿಂಬೆಹಣ್ಣು ಹಿಂಡಿದರೆ ಆ ಹ್ಹಾ ----.
ಒಂದೊಂದು ವಿಭಿನ್ನ ರುಚಿ ಹಾಗು ಅತಿ ಆರೋಗ್ಯದಾಯಿಕ. ಜಾಸ್ತಿ ಎಣ್ಣೆ ಇಲ್ಲದ, ಮೃದುವಾದ, ಸುಲಭವಾಗಿ ಜೀರ್ಣವಾಗುವ ಉಪ್ಪಿಟ್ಟು ಅಥವಾ ಖಾರಾಬಾತ್ ಹಿರಿವಯಸಿಲಿನಲ್ಲಿ ಬಯಸುವ ಬೆಳಗಿನ ಉಪಹಾರ.
ಉಪ್ಪಿಟ್ಟಿನ ಇನ್ನೊಂದು ಅತಿ ವಿಶೇಷ ಬಹಳ ಜನಕ್ಕೆ ಗೊತ್ತಿಲ್ಲ ಅಥವಾ ಅವರು ಪ್ರಯತ್ನಿಸಿಲ್ಲ. ಇದನ್ನು ಬೇರೆ, ಬೇರೆ ಸಂಗಾತಿಗೊಳೊಡನೆ ತಿನ್ನುವ ರುಚಿಯೇ ಬೇರೆ . ಸುಮಾರು ಐವತ್ತು ವರ್ಷಗಳ ಹಿಂದೆ ನಂಜನಗೂಡಿನ ನಮ್ಮ ಸೋದರ ಅತ್ತೆ ಮನೆ ( ಜಾರುಬಂಡೆ ಮನೆ ಅಂತ ಪ್ರಸಿದ್ದಿಯಾಗಿತ್ತು ) ಯಲ್ಲಿ ಮಾಡುತ್ತಿದ್ದ ಯಥೇಚ್ಛ ತೆಂಗಿನತುರಿ ಹಾಕಿ ಮಾಡುತ್ತಿದ್ದ ಅಕ್ಕಿತರಿ ಉಪ್ಪಿಟ್ಟು, ತುಪ್ಪ, ಜೊತೆಗೆ ಅಮಟೆಕಾಯಿ ಉಪ್ಪಿನಕಾಯಿ ಅಥವಾ ಮಾವಿನಕಾಯಿ ಉಪ್ಪಿನಕಾಯಿ ಸವಿ ಇನ್ನು ಬಾಯಿಯಿಂದ ಮರೆಯಾಗಿಲ್ಲ. ಅದನ್ನು ಸವಿಯಲೆಂದೇ ದೂರದೂರದ ಊರುಗಳಿಂದ ನೆಂಟರು ಬರುತ್ತಿದ್ದರು.
ಅಂದರೆ ಯಾವುದೇ ಉಪ್ಪಿನಕಾಯಿ, ಚಟ್ನಿ ಪುಡಿ, ಮೆಂತ್ಯದ ಪುಡಿ, ಹುಚ್ಚೆಳ್ಳು ಪುಡಿ, ಪುಳಿಯೋಗರೆ
ಪುಡಿ, ಜೊತೆಗೆ ನಮ್ಮ ಉಪ್ಪಿಟ್ಟು ಡ್ಯುಯೆಟ್ ಹಾಡಲು ರೆಡಿ.
ಇನ್ನು ಗೊಜ್ಜುಗಳು, ಸಾರಿನ ಗಸಿ,ಸಾಂಬಾರ್ ಗಳ ಜೊತೆ ಒಂದು ತೂಕವಾದರೆ, ಸಕ್ಕರೆ, ಬೆಲ್ಲ-ಕಾಯಿತುರಿ ಜೊತೆಗಿನ ರುಚಿ ಬಲ್ಲವನೇ ಬಲ್ಲ. ಆದರೆ ಗಟ್ಟಿ ಮೊಸರಿನ ಜೊತೆಗಿನ
ಬಾಂದವ್ಯ ಅಯ್ಯೋ, ಅಲ್ಟಿಮೇಟ್.
ಉಪ್ಪಿಟ್ಟಿನ ದೋಸೆ ಒಮ್ಮೆ ಅವೆನ್ಯೂ ರೋಡಿನ ಸಂಧಿಯ ಹೋಟೆಲಿನಲ್ಲಿ ಸವಿದಿದ್ದೇ. ಸ್ನೇಹಿತನ ಹೆಂಡತಿ ಒಮ್ಮೆ ಉಪ್ಪಿಟ್ಟಿನ ಕಟ್ಲೇಟ್ ಮಾಡಿ ಕೊಟ್ಟಿದ್ದರು.
ಒಮ್ಮೆ ಶತ್ರುವಾಗಿ ಶುರುವಾಗಿದ್ದ ನಮ್ಮ ನೆಂಟಸ್ಥನ ಇಂದು ಅವಿನಾಭಾವ
ಸಂಬಂಧವಾಗಿ
ಮಾರ್ಪಟ್ಟಿದೆ.
ಹಾ
, "ಫೆಮಿಲಿಯಾರಿಟಿ ಸಿಂಡ್ರೋಮ್" ಅಂತ ದಿನಾ ನೋಡುತ್ತಿದ್ದರೆ ನಾಲಿಗೆ ತರಾಟೆಗೆ ತೆಗೆದುಕೊಳ್ಳಬಹುದು, ಆದರೆ ರುಚಿ, ಶುಚಿ, ಸವಿ, ಸಾತ್ವಿಕ ಉಪ್ಪಿಟ್ಟಿಗೆ ಒಂದು ದೊಡ್ಡ ನಮಸ್ಕಾರ ಎಂಬಲ್ಲಿಗೆ ಈ ಉಪ್ಪಿಟ್ಟಿನ ಪ್ರಹಸನ ಸಂಪೂರ್ಣ.
ನೆಲಮನೆ ಶ್ರೀನಿವಾಸನ್

Comments