ಕಲಾಯಿ ಸಾಬಿ.
ಕಲಾಯಿ ಸಾಬಿ.
ಕಲಾಯಿ ಸಾಬಿ ನಮ್ಮ ರೋಡಿಗೆ ಬಂದರೆ ನಾವು ಹುಡುಗರಿಗೆಲ್ಲಾ ಏನೋ ಖುಷಿ. ಅವನು ಒಂದು ಮರದ ನೆರಳಿನಲ್ಲಿ, ಮಣ್ಣಿನಲ್ಲಿ ಎರಡು ಹಳ್ಳ ತೋಡಿ, ಒಂದರಲ್ಲಿ ತಿದಿ ಒತ್ತುವ ಕೊಳವೆ ತೂರಿಸಿ, ಇನ್ನೊಂದರಲ್ಲಿ ಇಜ್ಜಲು ಹಾಕಿ , ಬೆಂಕಿ ಹೊತ್ತಿಸಿ,ನಂತರ ಹತ್ತಿರದ ಮನೆಯಿಂದ ಒಂದು ಬಕೆಟ್ ನೀರು ಕೇಳಿ ಪಡೆದು, ಅಲ್ಲಿದ್ದ ಕೆಂಡದಲ್ಲಿಯೆ ಬೀಡಿ ಹೊತ್ತಿಸಿ, ಹೊಗೆ ಬಿಡುತ್ತ ತಿದಿ ಒತ್ತಲು ಪ್ರಾರಂಭಿಸುತ್ತಿದ್ದ. ಅವನ ಬಡಕಲ ಎದೆಗೂಡು ಕೂಡ ತಿದಿ ಒತ್ತಿ, ಬೀಡಿ ಪ್ರಕಾಶಮಾನವಾಗಿ , ಬುಸ್, ಬುಸ್ ಎಂದು ಹೊಗೆ ಹೊರಹಾಕುತ್ತಿತ್ತು. ಅಷ್ಟ ರಲ್ಲಿ ಅವನ ಛೋಟು ಮನೆ, ಮನೆಗೆ ತೆರಳಿ ಕಲಾಯಿ ಸಾಭಿಯ ವೈಭೊವೊಪೇತ ಆಗಮನ ತಿಳಿಸಿ, ಪಾತ್ರೆಗಳನ್ನು ತರುವಂತೆ ಕೇಳುತ್ತಿದ್ದ.
ಕಲಾಯಿ ಸಾಭಿಯ ಕೈಚಳಕ ನೋಡುವುದೇ ಒಂದು ಸೊಗಸು. ಅದೊಂದು ಕಲೆ. ಅಲ್ಲಿ ಎಂಜೀನಿಯರ್ ನ ತಂತ್ರಗಾರಿಕೆ, ಸರ್ಜನ್ ರ ಕುಶಲತೆ, ಪಂಡಿತರ ಶ್ರದ್ದೆ ಕಾಣಬಹುದಾಗಿತ್ತು.
ಹಿತ್ತಾಳೆ ಪಾತ್ರೆ ಚೆನ್ನಾಗಿ ಕಾಯಿಸಿ, ಅದರಲ್ಲಿ ತವರದ ಪುಡಿ(ದೊಡ್ಡವನಾದ ಮೇಲೆ ತಿಳಿದದ್ದು, ಅಲ್ಲಿಯವರೆಗೂ ಅದು ಖಲಾಯಿ ಅಥವಾ ಬೆಳ್ಳಿ(?) ಪುಡಿ) ಹಾಕಿ, ಒಂದು ತುಂಡು ಬಟ್ಟೆ ತೆಗೆದುಕೊಂಡು ಪಾತ್ರೆಯ ಒಳ ಮೈಗೆ ಚೆನ್ನಾಗಿ ಬಳಿಯುತ್ತಿದ್ದ. ತಕ್ಷಣ ಅದು ಮೇಕಪ್ ಮಾಡಿದ ಯುವತಿಯಂತೆ ಲಕ,ಲಕ ಹೊಳೆಯುತ್ತಿತ್ತು. ಅಲ್ಲಿ ಸೇರಿದ್ದ ನಮ್ಮ ಚಿಳ್ಳೆ, ಪಿಳ್ಳೆ ಗುಂಪು ಜೋರಾಗಿ ಚಪ್ಪಾಳೆ ಹೊಡೆದರೆ,ಸಾಬಿ ಮುಖದಲ್ಲಿ, ಒಂದು ಮಂದಹಾಸ, ಧನ್ಯತೆಯ ಭಾವ.
ಕೆಲಸ ಎಲ್ಲಾ ಮುಗಿಸಿ ಮತ್ತೆ ಬೀಡಿ ಯಜ್ಞ ಮಾಡಿ ಮುಗಿಸಿವಷ್ಟರಲ್ಲಿ ಸಾಬಿ ಜೂನಿಯರ್, ಗೋಣಿಚೀಲದಲ್ಲಿ ಎಲ್ಲಾ ಸಲಕರಣೆಗಳನ್ನು ಪ್ಯಾಕ್ ಮಾಡಿ, ಅಲ್ಲಿಂದ ಮುಂದಿನ ಠಿಕಾಣಿ ಹುಡುಕಲು ಹೊರಡುತ್ತಿದ್ದರು. ನಮಗೆ ಅವನು ಮಾಡಿದ ಕೆಂಡದ ಗುಂಡಿಯಲ್ಲಿ ಹೊಳೆಯುವ ತವರದ ಪೀಸ್ ಗಳನ್ನು ಹುಡುಕುವ ಕೆಲಸ.
ಇಂದು ಹಿತ್ತಾಳೆ ಪಾತ್ರೆಯೂ ಇಲ್ಲ, ಕಲಾಯಿ ಮಾಡುವವರೂ ಕಮ್ಮಿ. ಆ ಎಲ್ಲಾ ಕಸುಬು ಗಳಿಗೂ ಇಂದು ಕಿಲುಬು ಹಿಡಿದಿದೆ. ಆದರೆ ಬಾಲ್ಯದ ನೆನೆಪು ಹಾಗೆ ಇದೆ.

Comments